ಮ್ಮ.

ಹೀಗೆ, ಅಮ್ಮನ ಬಗ್ಗೆ ಒಂದು ಕವನ ಬರೀಬೇಕು ಅಂತ ಶುರು ಆಗಿ, ಅದೇಕೋ ಸ್ವಲ್ಪ ಪದಗಳ ಜೊತೆ ಆಟ ಆಡೋ ಮನಸಾಗಿ ಈ ಕವಿತೆ ಬರೆದಿದ್ದೇನೆ.

ಈ ಕವನದ ವಿಶೇಷ ಏನೆಂದರೆ, ಈ ಕವನದ ಶೀರ್ಷಿಕೆಯಲ್ಲಿ ತಪ್ಪಿ ಹೋದ ಒಂದು ಅಕ್ಷರ, ಕವನದ ಪ್ರತಿ ಪದದಲ್ಲೂ ಪದೇ ಪದೇ ಇಣುಕಿ ಹಾಕುತ್ತೆ :) .

------------------
ಮ್ಮ.

ಅಪರಿಮಿತ ಅಕ್ಕರೆಯ,
ಅನ್ವರ್ಥವೇ..
ಅಮ್ಮ.

ಅನ್ಯಾಯವ ಅರಿಯದ,
ಅನುರಕ್ತೆ..
ಅಮ್ಮ.

ಅದೆಷ್ಟೋ ಅಸಹನೆಗಳ,
ಅದುಮಿಡಬಲ್ಲಳು..
ಅಮ್ಮ.

ಅರೆಕ್ಷಣದ ಅಗಲಿಕೆಯನೂ,
ಅನುಭವಿಸಳು..
ಅಮ್ಮ.

ಅಸಾಧ್ಯ ಅಳಲನೂ,
ಅಳಿಸಿಹಾಕಬಲ್ಲಳು..
ಅಮ್ಮ.

ಅತುಲ್ಯ ಅನುಬಂಧದ,
ಅನುಭೂತಿ..
ಅಮ್ಮ.

ಅಪೂರ್ವ, ಅಮೂಲ್ಯ,
ಅನರ್ಘ್ಯಗಳಿಗೆ..
ಅರ್ಥವೇ..
ಅಮ್ಮ.

ಅನನ್ಯ, ಅಚ್ಚಳಿಯದ
ಅವಿಸ್ಮರಣೀಯ..
ಅಮ್ಮ.

ಅನುಗಾಲವೂ..
ಅಭಯಹಸ್ತವಿರಲಿ,
ಅನ್ನುವುದೊಂದೇ, ಅರಿಕೆ..
ಅಮ್ಮ

ಅವಳಂತರಂಗದ
ಅಮಿತ ಅನುರಾಗ,
ಅಮರ,.. ಅಜರಾಮರ
ಅಮ್ಮ..

___________________________________________________________

ನವೆಂಬರ್, ೨೦೦೭

Comments

Popular posts from this blog

ಗಡಿಯಾರ-ಜೀವನಯಾನ

ಸ್ವಾಭಿಮಾನ

ಬವಣೆ