Posts

ನೆನೆ

ಏಕೋ, ಹೇಗೋ ತೊಯ್ದ ಅನುಭವ.. ಒಮ್ಮೆ ಪನ್ನೀರ ಚುಮುಕಿಸಿದಂತೆ ಸಿಂಚನ.. ಮತ್ತೊಮ್ಮೆ ಚಟಪಟ ನೀರ ನರ್ತನ. ಕೆಲವು ಬಾರಿಯಂತೂ, ಧುಮ್ಮಿಕ್ಕುವ ಜಲಪಾತದಡಿಯ ಭೋರ್ಗರೆತದ ಸ್ನಾನ. ಮಳೆಯ ಸುಳಿವಿಲ್ಲದಿದ್ದರೂ ನಡೆದುದ್ದಿದೆ ಕೊಡೆ ಹಿಡಿದು, ಬಿಸಿಲ ಝಳದಲೂ ಧರಿಸಿದ್ದಿದೆ ಮಳೆಕೋಟನು! ಅರಿತಿದ್ದು ತಡವಾಯಿತೋ ಏನೋ? ನೆನೆದದ್ದು ನೆನಪಧಾರೆಯಲ್ಲೆಂದು! ಮೇಘ ಕರಗಿ ನೀರಾಗುವ ಪ್ರಕ್ರಿಯೆಯಿಂದಲ್ಲವೆಂದು!!! 7/13/2019
ತ್ರಿಪುರ ಸುಂದರಿ --- ಸುಂದರವಾಗಿ ಅಲಂಕರಿಸಿ, ಮಾಟಗಾತಿಯ ಮಾಯಾ ದರ್ಪಣ ತರಿಸಿ, ಕೇಳಿ ಖಚಿತ ಪಡಿಸಿ, ಹಿಗ್ಗಿ ನಾನೇ ಈ ಜಗದ ಚೆಲುವಿನರಸಿ.. ತೇಲುತಿರಲು, ಅಹಮ್ಮಿನಾಕಾಶದಲಿ ವಿಹರಿಸಿ.. ನಗುತ್ತಿತ್ತು ಆಧಾರ್ ಕಾರ್ಡಿನ ಭಾವಚಿತ್ರ ಗಹಗಹಿಸಿ!!

ಬವಣೆ

Image
ಮ್ಯಾಲ್ಯಾಕೆ ಕುಂತೆ ಸಿವನೆ ? ತೋರಲೆಂದೆ ಬದುಕೊಂದು ಬವಣೆ ? ಸಾಗಬೇಕು ಒಂದೇ ಸಮನೆ, ಗುರಿ ಕಡೆಗೆ ಕೆಡದಂತೆ  ಸಹನೆ     ।ಪ। ಎಷ್ಟಿದ್ದರೇನು ದೂರ, ನಿನ್ನ ಕಾಣೋ ಖುಷಿಯೇ ಮಧುರ. ಹೊರಲಾರದಂತ ಭಾರ, ನಿನ್ನ ಜಪದಿ ಎಲ್ಲವೂ ಹಗುರ.   ।೧। ನಿನ್ನ ಕಾಣಲೆಂಬ ಹಠಕೆ.. ಮೇರು ಗಿರಿಯೂ ಹುಲ್ಲ ಗರಿಕೆ. ನೆತ್ತಿ ಸುಡುವ ಬಿಸಿಲ ಝಳಕೆ, ಭಕ್ತಿಬೆವರ ತಂಪಿನ ಹೊದಿಕೆ   ।೨। November 2017

ಪಗಡೆ

Image
ಸಾಗಲೇ ಬೇಕು ನಿನ್ನ ನಡೆ. ಇದ್ದರೂ ನೂರಾರು ಅಡೆ-ತಡೆ. ಅರೆಕ್ಷಣ ಕಣ್ಮುಚ್ಚಿ, ಮರೆತೊಡೆ.. ಅಷ್ಠ ದಿಕ್ಕಲ್ಲೂ  ಶತ್ರುಪಡೆ. ಸುತ್ತಾಮುತ್ತಾ, ಎಲ್ಲಾ ಕಡೆ ಪ್ರೇಮಾನೇ ಇದ್ರೆ, ಯಾಕ್ಬೇಕ್ ಗೋಡೆ? ನಿಲ್ಲದ ಜೀವನದಾಟವಿದು.. ಎಂದೂ ಇಲ್ಲ, ಬಿಡುಗಡೆ ಯಾರನೋ ತಡೆಯುವ ಯತ್ನದಲಿ ಮುಚ್ಚದಿರು ನೀ, ನಿನ್ನಯ ಗೂಡೆ! ಏಣಿಯ ಹತ್ತುವ ತವಕದಲಿ ತುಳಿಯದಿರು ನೀ ಹಾವ ಹೆಡೆ. ಕಾಯದ ಕಾಯಿಯ ಹಣ್ಣು ಮಾಡಿಸೋ ಬದುಕೇ ಈ ಪಗಡೆ. ಕಾಯಿಯ ಮುನ್ನಡೆ, ಹೇಗೋ? ಏನೋ? ನಿನ್ನಯ ಕೈಲಿಲ್ಲ, ಆ ಕವಡೆ March 2018

ಗಡಿಯಾರ-ಜೀವನಯಾನ

Image
ಗಡಿಯಾರ-ಜೀವನಯಾನ --------- ಬಿಡುವಿರದೆ, ಎಡೆಬಿಡದೆ ಉರುಳುತಿಹೆ ಎಂದೆಂದೂ ಎಲ್ಲಿಗೆಂದು ಕೇಳ್ವೊಡೆ, ತಿಳಿದಿಲ್ಲ ಹಿಂದು-ಮುಂದು! ದಾಟಿ ದಾಟಿ ಅಂಕೆಗಳ ಮೈಲಿಗಲ್ಲು, ಗಮ್ಯ ತಲುಪಿದೆನೆಂದು ಹಿಗ್ಗಿತು ನಿಮಿಷದ ಮುಳ್ಳು! ಇಂತಾವೆ ಸುತ್ತು, ಸಾವಿರವೇ ಆತು, ಮುಗಿಯದ ಪಯಣವಿದೆಂದು ಗೊಳ್ಳೆಂದಿತು ಕ್ಷಣದ ಮುಳ್ಳು. ಸರಿ ಸಾಕಿನ್ನು ಗುರಿ ತಲುಪುವ ಭ್ರಮೆ. ಸವಿಯುವೆನು ಸಂಚಾರದಲಿರುವ ನಲುಮೆ. ನಿಂತು ನಿಂತು ಬೆಳೆಸಿದೆ ಸಂಕೆಮಿತ್ರರ ಒಡನಾಟ. ಬದುಕಿನಲಿ ಇನ್ನಿಲ್ಲ ಏಕತಾನತೆ ಕಾಟ. ಕೇಳು ನೀ ಮನುಜ, ಬದುಕೊಂದು ತೆವಳುವ ಗಡಿಯಾರ. ಗುರಿಯಿರದ ಕಡೆಗೆಲ್ಲೋ ಮುಗಿಯದ ಸಂಚಾರ. ಜೀವನಯಾನದಲಿ ತುಂಬಿರಲಿ ಸಹಚರರು ಪ್ರೀತಿ ಹಂಚುತ ಸಾಗು, ಕಡೆಯ ನಿಲ್ದಾಣ ಬರುವುದೆಂದೋ ಬಲ್ಲವರು ಯಾರು? ==== ಚುಟುಕು -------- ಜಗವೆಲ್ಲಾ ಒಂದು ಗಡಿಯಾರದಂಗಡಿ ಜನರೆಲ್ಲಾ ಇದ್ದಂತೆ ಒಂದೊಂದು ಘಡಿ ಮಿಡಿವ ಹೃದಯವೇ ನಿಮಿಷದ ಮುಳ್ಳು. ಬಡಿತ ನಿಂತರೆ ಬದಲಾಯಿಸಲು ಇಲ್ಲ ಯಾವುದೇ ಸೆಲ್ಲು!! ಸೆಲ್ಲು=battery ========  ಗಡಿಯಾರದಳಲು. (ಅಪೂರ್ಣ.. ) ------- ಜಗವೆಲ್ಲಾ ಮಲಗಿದರೂ ನನಗಿಲ್ಲ ಬಿಡುವು ಹಗಲಿರಲಿ ಇರುಳಿರಲಿ ನಾನೀಜೋ, ನದಿಗಿಲ್ಲ ದಡವು!! ಕಣ್ಣಿಗೆಣ್ಣೆಯ ಹಾಕಿ ತಿರುಗುವೆ ನಾ ಗಸ್ತು. ಸೌಜನ್ಯಕ್ಕಾದರೂ ಕೇಳಬಾರದೆ ನಿನಗಾಯಿತಾ ಸುಸ್ತು? ನಸುಕಿನಲಿ ನಾ ಕೂಗಿ ಕರೆದೊಡೆ ಆಣತಿಯಂತೆ. ತಲೆಗೊಂದು ಬಡಿದು ಮಗ್ಗುಲು ಬದಲಿಸುವರು ನಾ ಯಾರೋ, ತಿಳಿದೇ ಇಲ್ಲದಂತೆ!

ವೇಷ

Image
ಹೊಸದೇನನ್ನೋ ಬರೆಯಬೇಕೆಂಬ  ತುಡಿತದಿಂದ ಬರೆದಿದ್ದು ಈ ಸಾಲುಗಳು. ಯಾವುದೇ ಭಕ್ತಿ-ಭಾವಗಳಿಗೆ ಧಕ್ಕೆ ಗೊಳಿಸುವ ಉದ್ದೇಶ ಖಂಡಿತ ಇಲ್ಲ ------- ಗಂಗಾಧರನಿಗೆತ್ತೆನೋ ಭೀತಿ ಜಟೆಯ ತೆರೆದೆಡೆ, ಓಡಿಬಿಡುವಳೆಂದು ಕಿರಿಪತ್ನಿ ಚಂದ್ರಶೇಖರನಿಗಿ -ದ್ದಿರಬಹುದು ಆತಂಕ ಶಶಿಯ  ಕೆಳಗಿಳಿಸಿದರೆ, ಕೊಡುವರಾರೆಂದು ಧರೆಗೆ, ಇರುಳ ಬೆಳಕ! ಹೀಗೆ ಏನಿತ್ತೋ ಆತನಿಗೆ ಸಾಸಿರ ಬಿಕ್ಕಟ್ಟು. ಅದೇ ಚಿಂತೆಯಲಿ ಗಮನ ಕೊಡದೆ  ಜಡ್ಡುಗಟ್ಟಿತೊ ಜುಟ್ಟು. ಅವನ ವೇಷ ಅವಗೆ ಬಿಟ್ಟು  ತಿಳಿವುದೊಳಿತೇನೋ ಶಿವನಾಂತರ್ಯದ ಗುಟ್ಟು  ವೇಷದ ಅನುಕರಣೆಯಿಂದೊಂದೇ ಆಗದು ಶಿವಸಾಕ್ಷಾತ್ಕಾರ. ಕೃತಿಯಲ್ಲಿ , ಕರ್ಮದಲಿ ಇರಲಿ ನಿಷ್ಠೆ, ಎಲ್ಲೆಲ್ಲೂ  ಇರುವನವನೇ  ನಿರಾಕಾರ

ನೀಲಕಂಠನ ರಂಗಿನ ರಹಸ್ಯ

Image
ನೀಲಗಗನದ ಮೇಲೆ ತೇಲುತಿಹ ಖಗವೇ. ಬೇಗ ಹೇಳೇಲೆ ನೀ ರ೦ಗು ಪಡೆದ ಬಗೆಯೇ? ನೀಲಸಾಗರದಲಿ ಮುಳುಗಿ ಎದ್ದ ಜಲವೇ? ನೀಲ ಗಿರಿಗಳ ಮೇಲೆ ಹಾದು ಹೋದ ಫಲವೇ? ನೀಲಾಕಾಶದೊಡನಿ ರುವ ನಿನ್ನೊಡನಾಟದ ಗುರುತೇ? ನೀಲ ಮೇಘ ಶ್ಯಾಮ ಮೈದಡವಿ ತೋರಿದನೆ ಮಮತೆ? ಸಾಕು ನಿಲಿಸುವೆ ಇನ್ನು ನಿನ್ನ ಬಣ್ಣದೊಡವೆಯ ಹಿ೦ದಿರುವ ಒಗಟ ಬಿಡಿಸುವ ಗೊಡವೆ ಸೊಬಗ ಸವಿವುದ ಬಿಟ್ಟು ಮೂಲ ಹುಡುಕಿ ನಾ ಏನ ಪಡೆವೆ!? ಎ೦ಬ ಸತ್ಯವು ಅರಿವಾದುದು ಸ್ವಲ್ಪ ಆಯಿತು ತಡವೆ! ---------------------------- ಆಗಸ್ಟ್ ೨, ೨೦೧೭ Attachments area