Posts

Showing posts from April, 2009

ಚಂಚಲ

ಮನದ ಕುಲುಮೆಯಲೀಗ, ಕಾದ ತಗಡಿನ ಕನಸು, ಕೊರೆವ ಚಳಿಯಲೂ ಕೂಡ.. ಬಿಡದೆ ಸುಡುತಿದೆ ಮನಸು.. ಕಾದ ಸಮಯವ ಕಾದು, ಹದವ ಮಾಡುವ ನೆಪದಿ, ತಿದಿಯನೊತ್ತುವ ವಿಧಿಯ.. ತಡೆದು ಕೇಳುವರಾರು!? ಹೊತ್ತು ಹೊತ್ತಿಗೆ, ಸುತ್ತ ಸುತ್ತಿಗೆ ಪೆಟ್ಟು, ಮೀರಿದಾಸೆಗಳಿಗೆ, ಸರಿ ಆಕಾರವಾ ಕೊಟ್ಟು,ಏನೇ ಆದರೂ ಕೂಡ ಬಿಡದೆ, ಹಿಡಿದ ಪಟ್ಟು, ಹಟವ ಮಾಡುವ ಮನವ ತಡೆದು ಹಿಡಿಯುವುದೆಂತು !? ___________________________________________________________ ಏಪ್ರಿಲ್, 2008

ನಾಚಿಕೆ

ಬರೆಯುತ್ತಿದ್ದೆ ನನ್ನವಳ, ಭಾವಚಿತ್ರ, ಧರಿಸಿ ಕೇವಲ ಒಳ-ಅಂಗಿ,ವಸ್ತ್ರ.. ಚಿತ್ರಕ್ಕೆ .. ಕಣ್ಣು ಮೂಡುವಷ್ಟರಲ್ಲಿ, ಅದೇನೋ ಮುಜುಗರ.. ಓಡಿ ಹೋಗಿ ಅಂಗಿ ಧರಿಸಿ, ಮುಂದುವರಿಸಬೇಕಾಯ್ತು.. ಅವಳ ಚಿತ್ರ.. ___________________________________________________________ ಫೆಬ್ರವರಿ, ೨೦೦೮

ಕಿರಿಕಿರಿ

ತಾರೆಗಳಿಗೇಕಿಂತ ನಾಚಿಕೆ.. ಮುಖ ಮುಚ್ಚಿ, ಬೆರಳ ಸಂದುಗಳಲ್ಲಿ ನೋಡಿ.. ನಗುತ್ತಿರುವುದಾದರೂ.. ಏತಕೆ ?? ಮುದಿ ಚಂದಿರನಿಗೇಕೋ, ಏನೋ ಹುಸಿನಗು.. ಅಣಕಿಸಿ ಅಂದಂತೆ..ಇದೆಲ್ಲಾ ನಾ ವಯಸ್ಸಲ್ಲಿ ಮಾಡಿ.. ಬಿಟ್ಟಿದ್ದಲ್ಲವೇ.. ಮಗು.. ಅವಳ ಬೆಚ್ಚಗಿನ ಸಾನಿಧ್ಯವ ಸವಿಯಲು ಬಿಡದೆ.. ತರಿಸುವುದು ಚಳಿ.. ಸುಳಿಸುಳಿದು ಸುಮ್ಮನೆ ಮೂಗು ತೂರಿಸುವ ಅಧಿಕಪ್ರಸಂಗಿ ತಂಗಾಳಿ.. ಅದೆಷ್ಟೆ..ನಿರ್ಜನ ಜಾಗಕ್ಕೇ.. ಹೋಗಲಿ..ಈ ಮೂವರದ್ದೆ.. ಕಿರಿಕಿರಿ. ನನ್ನವಳ ಹೇಗೆ ಮುದ್ದಿಸಲಿ, ಇವರನ್ನೆಲ್ಲಾ ವಂಚಿಸಿ ? ತಿಳಿಯದಾಗಿದೆ ದಾರಿ.. ___________________________________________________________ ೨೪ ಫೆಬ್ರವರಿ, 2008

ನನ್ನ ಕವನ

ನನ್ನ ಕವನಗಳಿಗೆ, ಹಾಕಲು.. ಬಾರದು.. ಯಾವುದೇ ಛಂಧಸ್ಸು.. ಏಕೆಂದರೆ, ಅದರಲ್ಲಿದೆ.. ಲಘು-ಗುರುಗಳಿಗೆ.. ಮೀರಿದ, ಒಂದು.. ಮನಸ್ಸು.. ___________________________________________________________ ನವೆಂಬರ್, 2007

ವಿಚಿತ್ರದವಳು...

ಕರೆಯಲ್ಲಿದ್ದಾಗಲೆಲ್ಲ.. ನೀ ಸಿಗಲೇ ಇಲ್ಲಾ.. ನಿನ್ನ ನೋಡಿ ಅದೆಷ್ಟು, ದಿನಗಳಾದವು ಎಂದೆಲ್ಲಾ,.. ಕೊರೆವವಳು.. ಎದುರು ಬಂದು ನಿಂತಾಗ.. ಇದೇಕೆ, ಹೀಗೆ ಮಾತು ಮರೆತವಳಂತೆ, ಮೌನವಾದಳು ?? ಪತ್ರಗಳಲೆಲ್ಲ.. ತನ್ನ ಪದ-ಪಾಂಡಿತ್ಯವ.. ಮೆರೆದವಳು, ಇದೇಕೆ ಹೀಗೆ.. ನಾ ಎದುರು ಬಂದಾಗ.. ಪದಗಳಿಗೆ ಬರವಿದ್ದಂತೆ, ಪರದಾಡುವಳು ?? ಇವಳೇನಾ ಅವಳು.?? ಎಂದೆಲ್ಲಾ ಅನಿಸುವವಳು., ಮಾತಿಲ್ಲದಿದ್ದರೇನಂತೆ.. ಕ್ಷಣದಲ್ಲಿ..ಬರೀ.. ಕಣ್ಣಲ್ಲೇ..ಎಲ್ಲವನೂ, ಹೇಳಬಲ್ಲವಳು.. ಈ ನನ್ನ, ವಿಚಿತ್ರದವಳು.. ___________________________________________________________ ನವೆಂಬರ್, ೨೦೦೭

ಯಕ್ಷ ಪ್ರಶ್ನೆ ?

ಮನದ ಬಾಗಿಲ ಬಳಿ ಬಂದ ಭಾವಗಳು, ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಮರಳಿದವೇಕೆ ? ನಾಲಿಗೆಯ ತುದಿಗೆ.. ಬಂದ ಎಷ್ಟೋ ಮಾತುಗಳು, ಮತ್ತೊಂದಿಷ್ಟು ಧೈರ್ಯ ಮಾಡಲಿಲ್ಲವೇಕೆ ? ಗರಿಗೆದರಿ, ಒಳಗೊಳಗೆ ಘರ್ಜಿಸಿದ ಆಸೆಗಳು, ಕುಯ್ ಗುಡುತ್ತ, ಬಾಲ ಮುದುರಿ ಮೂಲೆ ಸೇರಿದ್ದೇಕೆ ? ನಾನೆಂಬ ಶತೃವೇ ? ನನ್ನದೇ ಎಂಬ ಹುಚ್ಚು ಭರವಸೆಯೇ ? ನನ್ನದಾಗುವುದಿಲ್ಲವೆಂಬ ವಿರಕ್ತಿಯೇ ? ಪ್ರಶ್ನೆಗಳು, ಪ್ರಶ್ನಿಸಿದಷ್ಟೂ ಉತ್ತರಿಸಲಾರದಷ್ಟು…. ಜಟಿಲವಾಗುತ್ತಿವೆಯೇಕೆ ?? ___________________________________________________________ ನವೆಂಬರ್, ೨೦೦೭

ವ್ಯತ್ಯಾಸ

ಮನಸಾರೆ ಮುಕ್ಕಾಲು ಮೊಳ, ಮಲ್ಲಿಗೆ ತಂದಿದ್ದರೆ ಸಾಕಿತ್ತು, ಮೊರದಷ್ಟಗಲವಾಗುತ್ತಿತ್ತು, ಮಡದಿಯ ಮೊಗ, ಮುಂಚೆಲ್ಲಾ.. ಈಗೀಗ, ಮುಕ್ಕಾಲು ಸಂಬಳ, ಖರ್ಚು ಮಾಡಿ, ಅವಳ ರಮಿಸಿದರೂ.. ಒಂದು ಸಣ್ಣ ಹೂನಗೆ ನಕ್ಕು, ಸುಮ್ಮನಾಗುವಳಲ್ಲಾ.. ___________________________________________________________ ಅಕ್ಟೊಬರ್, ೨೦೦೭

ರೆಸ್ಟೋರೆಂಟು

ಅದೇ ಹಳೆಯ ರೆಸ್ಟೋರೆಂಟು.. ನನಗೂ ಅದಕ್ಕೂ, ಅದೇನೋ ಬಿಡಿಸಲಾಗದ ನಂಟು.. ಅದೇ ಮೂಲೆಯ ಮೇಜು.. ಮೇಜಿನ ಮೇಲಿನ, ಅದೇ ಹೊಳಪುರಹಿತ ಗ್ಲಾಸು.. ಅಭ್ಯಾಸವಾಗಿದ್ದಂತೆ, ತಂದಿಟ್ಟ ಮಾಣಿ.. ಮುಗುಳ್ನಗುತ್ತಾ.. ಎರಡು ಕಾಫಿ.. ಕೇಳಲೋ ಬೇಡವೋ ಎಂಬಂತೆ ಕೇಳಿದ "ಲೇಟೇನೋ ಅಮ್ಮಾವ್ರು".. ಒಂದು ಕ್ಷಣ ಸಿಡಿಮಿಡಿ.. ಉತ್ತರಗಳಿಗೆಲ್ಲಾ ತಡಕಾಡಿ, "ಹಾ" ಎಂಬೊಂದು ಕ್ಷೀಣ ಉತ್ತರ.. ಒಂದು ಹನಿ ಹೀರುವಷ್ಟರಲ್ಲಿ, ತುಂಬಿದ್ದವು ಹನಿಗಳು, ಕಣ್ಣ ತುಂಬಾ.. ಮಸುಕು ಮಸುಕಾಗತೊಡಗಿತ್ತು.. ಮನದ ಪುಟದಲ್ಲಿದ್ದ, ಅವಳ ಬಿಂಬ, ಒಳಗೆಲ್ಲಾ.. ಅದೇನೋ.., ತೋಚದ ಬರೀ.. ಗೋಜಲು, ಗೋಜಲು.. ಅರೆಕ್ಷಣ ಅಲ್ಲಿರಲಾರದೆ.. ಹೊರನಡೆದೆ, ಬಿಲ್ ಪಾವತಿಸಿ, ಇಡುತ್ತಾ ದಾಪುಗಾಲು.. ಅದೇ ಹಳೆಯ ರೆಸ್ಟೋರೆಂಟು.. ಅದೇನೋ ಬಿಡಿಸಲಾಗದ ನಂಟು.. ಅದೇ ಮೂಲೆಯ ಮೇಜು.. ಮೇಜಿನ ಮೇಲಿನ, ಅದೇ ಹೊಳಪುರಹಿತ ಗ್ಲಾಸು.. ___________________________________________________________ ಅಕ್ಟೋಬರ್, 2007

ನೆನಪು

ಮನದ ತಟದಿ, ಬಡಿವ ನಿನ್ನ ನೆನಪಿನಲೆಗಳು, ಬಿಡದೆ ನನ್ನನು ಕಾಡಿ, ಮಾಡುತಿವೆ ಅದೇನೋ ಮೋಡಿ.. ಹೊತ್ತು ತಂದ, ಮುತ್ತು, ಚಿಪ್ಪು, ರತ್ನಗಳ, ಎದೆಯ ತುಂಬೆಲ್ಲಾ ಹರಡಿ.. ಮಾಡಿದೆ ಅಳಿಸಲಾಗದಂತೆ..ರಾಡಿ.. ಅಲೆಗಳಪ್ಪಳಿಸುವಿಕೆಗೆ ಆಗಿರುವಾಗ, ಬಂಡೆಗಳೇ ಪುಡಿ ಪುಡಿ.. ನಾ ಅದಾವ ಲೆಕ್ಕ ಹೇಳೇ ?? ಈ ನಿನ್ನ ಪ್ರೀತಿ ರಭಸದಡಿ.. ___________________________________________________________ ಡಿಸೆಂಬರ್, 2007

ನನ್ನವ

ಅವ, ನನ್ನೆದೆಯ ಗೂಡೊಳಗಿನ, ನಿರಂತರ ಕಲರವ.. ಅವನ ಕಣ್ಣಲ್ಲಿ ಕಣ್ಣ, ಇಟ್ಟು ಮಾತನಾಡಲು.. ಅದೆನೋ ಢವ..ಢವ.. ಎದುರಿದ್ದಕ್ಕಿಂತ, ಮರೆಯಾದಾಗಲೇ..ಹೆಚ್ಚು, ಕಾಡುವನವ.. ಅವನಿದ್ದ ದಿನ, ನನ್ನೆದೆಯ ಗುಡಿಯ, ದೇವನಿಗದೋ..ಬ್ರಹ್ಮೋತ್ಸವ.. ಅವ, ನನ್ನೊಳಗೆ, ನನಗರಿವೇ ಇಲ್ಲದಂತೆ.. ಬೆರೆತು ಹೋದಂತಹ.. ಒಂದು..ಭಾವ. ___________________________________________________________ ಡಿಸೆಂಬರ್, ೨೦೦೭

ಮ್ಮ.

ಹೀಗೆ, ಅಮ್ಮನ ಬಗ್ಗೆ ಒಂದು ಕವನ ಬರೀಬೇಕು ಅಂತ ಶುರು ಆಗಿ, ಅದೇಕೋ ಸ್ವಲ್ಪ ಪದಗಳ ಜೊತೆ ಆಟ ಆಡೋ ಮನಸಾಗಿ ಈ ಕವಿತೆ ಬರೆದಿದ್ದೇನೆ. ಈ ಕವನದ ವಿಶೇಷ ಏನೆಂದರೆ, ಈ ಕವನದ ಶೀರ್ಷಿಕೆಯಲ್ಲಿ ತಪ್ಪಿ ಹೋದ ಒಂದು ಅಕ್ಷರ, ಕವನದ ಪ್ರತಿ ಪದದಲ್ಲೂ ಪದೇ ಪದೇ ಇಣುಕಿ ಹಾಕುತ್ತೆ :) . ------------------ ಮ್ಮ. ಅಪರಿಮಿತ ಅಕ್ಕರೆಯ, ಅನ್ವರ್ಥವೇ.. ಅಮ್ಮ. ಅನ್ಯಾಯವ ಅರಿಯದ, ಅನುರಕ್ತೆ.. ಅಮ್ಮ. ಅದೆಷ್ಟೋ ಅಸಹನೆಗಳ, ಅದುಮಿಡಬಲ್ಲಳು.. ಅಮ್ಮ. ಅರೆಕ್ಷಣದ ಅಗಲಿಕೆಯನೂ, ಅನುಭವಿಸಳು.. ಅಮ್ಮ. ಅಸಾಧ್ಯ ಅಳಲನೂ, ಅಳಿಸಿಹಾಕಬಲ್ಲಳು.. ಅಮ್ಮ. ಅತುಲ್ಯ ಅನುಬಂಧದ, ಅನುಭೂತಿ.. ಅಮ್ಮ. ಅಪೂರ್ವ, ಅಮೂಲ್ಯ, ಅನರ್ಘ್ಯಗಳಿಗೆ.. ಅರ್ಥವೇ.. ಅಮ್ಮ. ಅನನ್ಯ, ಅಚ್ಚಳಿಯದ ಅವಿಸ್ಮರಣೀಯ.. ಅಮ್ಮ. ಅನುಗಾಲವೂ.. ಅಭಯಹಸ್ತವಿರಲಿ, ಅನ್ನುವುದೊಂದೇ, ಅರಿಕೆ.. ಅಮ್ಮ ಅವಳಂತರಂಗದ ಅಮಿತ ಅನುರಾಗ, ಅಮರ,.. ಅಜರಾಮರ ಅಮ್ಮ.. ___________________________________________________________ ನವೆಂಬರ್ , ೨೦೦೭

ಪ್ರತೀಕಾರ

ನದಿ ತೀರದಲ್ಲೀಗ.. ಕಲ್ಲುಗಳೇ ಇಲ್ಲ.. ನನ್ನವಳ ನಿರೀಕ್ಷೆಯಲ್ಲಿ, ನಾನೇ.. ನೀರುಪಾಲು ಮಾಡಿದೆನಲ್ಲ.. ಎದೆಯಲ್ಲೀಗ.. ಅವಳು, ಅವಳಾಗೇ... ಉಳಿದಿಲ್ಲಾ.. ಮನದ ಕೊಳದಲ್ಲೀಗ.. ಬರೀ.. ಕಲ್ಲುಗಳೇ ತುಂಬಿವೆಯಲ್ಲ.. ಅಪರಾಧಿ ಭಾವ, ಬೆಂಬಿಡದೆ ಕಾಡುತ್ತಿದೆಯಲ್ಲಾ.!! ಅವಳ ನಿರೀಕ್ಷೆಯಲ್ಲೆಸೆದ .. ಆ ಕಲ್ಗಳೇ...ಹೀಗೆ ತಿರುಗಿ ಹಗೆ ಸಾಧಿಸುತ್ತಿವೆಯೇ ??..ತಿಳಿಯುತ್ತಿಲ್ಲವಲ್ಲಾ.. ___________________________________________________________ ನವೆಂಬರ್, 2007

ನನ್ನ ಕೆಲವು ಹಳೆಯ ಚುಟುಕುಗಳು...

ವಿರಹ ಮರೆತರೂ ಮರೆಯುವೆ ನಿನ್ನ, ಮರೆಯಲಿ ಹ್ಯಾಂಗೆ ? ಆ ನಿನ್ನ ಕಂಗಳನ್ನ, ಚೆಂದುಟಿಗಳನ್ನ, ಪ್ರೀತಿ ತುಂಬಿದ ಆ ನೋಟವನ್ನ, ವಿರಸ ತುಂಬಿದ ಎದೆಗೆ, ಸರಸ ತಂದ, ಆ ನಿನ್ನ ಮಾತುಗಳನ್ನ.. ನೀರೆ ಮನದ ಮರಳುಗಾಡಿನಲಿ, ಬಂದೆ ನೀ ಓಯಸಿಸ್ನಂತೆ.. ಆದರೂ, ಒಮ್ಮೆ ದಣಿವಾರಿಸಿಕೊಂಡು, ಬಹಳ ದಿನ ಕಳೆಯಲಾರೆ, ನಾ ಒಂಟೆಯಂತೆ.. ವಿಪರ್ಯಾಸ ಬಾಹುಗಳಿಲ್ಲದೆಯೂ ಬಿಗಿದಪ್ಪಿವೆ, ಬಳ್ಳಿಗಳೂ, ದೊಡ್ಡ ದೊಡ್ಡ ಮರಗಳನ್ನು.. ಬಾಹುಗಳಿದ್ದರೂ ಬಳಸಲಾಗದೆ, ಬಳಲುತ್ತಿರುವೆ.., ನನ್ನರಸಿಯನ್ನು.. ___________________________________________________________ ೨೦೦೪

ಅರ್ಥವಿಲ್ಲದ್ದು..

ಒಂದು ಅರ್ಥವಿಲ್ಲದ ನಗು, ಇಷ್ಟೆಲ್ಲಾ.. ಅನರ್ಥಗಳಿಗೆ ಈಡಾಗಬಹುದೆಂದೆಣಿಸರಲಿಲ್ಲ, ಹೀಗೆ.. ಸಂಬಂಧಗಳ ಬುನಾದಿಯ, ಅಲುಗಾಡಿಸುವಷ್ಟೂ.. ನನ್ನಾಪ್ತರ ಮನದಲ್ಲೂ, ಶಂಕೆ.. ಹುಟ್ಟಿಸುವಷ್ಟೂ.. ನಂಬಿದ್ದೆ ನಾ.., ನಗುವುದೊಂದು ದೈವದತ್ತ ಕೊಡುಗೆ, ಇಂದೇಕೆ..ಹೀಗೆ ಕಾಡುತ್ತಿದೆ, ಉರುಳಾಗಿ, ನನಗೆ ?? ಮನ್ನಿಸಿ ಎನ್ನ, ಅರ್ಥ ಹುಡುಕುತ್ತಾ ಕೂರಲಾರೆ.. ನಾ.. ಪ್ರತಿಬಾರಿ, ನಗುವ ಮುನ್ನ.. ___________________________________________________________ ಅಕ್ಟೊಬರ್, ೨೦೦೭

ಅಗಲಿಕೆ

ಅಂದಳು ಗೆಳತಿ, ಕಾಣದ ದೇಶಕೆ ವಲಸೆ ಹೋಗುವ ಯೋಜನೆ, ಸದ್ಯದಲ್ಲೇ.. ಇದೆಯೆಂದು.. ಓ! ಕೂಲ್, ಅಭಿನಂದನೆಗಳು ಬಡಬಡಿಸ ಹತ್ತಿತ್ತು ಬಾಯಿ, ಎಲ್ಲೋ ಎದ್ದ, ಕ್ಷೀಣ ದನಿಯ, ಮರೆಮಾಚಲೇನೋ ಎಂಬಂತೆ.. ನಿಯಂತ್ರಣ ತಪ್ಪಿದಂತೆ, ಒಂದೆ ಸಮನೇ ಕುಲುಕುತಿದ್ದವು ಕೈಗಳು, ಒಳಗಿದ್ದ ನಡುಕದ, ವಿಜೃಂಭಣೆಯೇನೋ, ಎಂಬಂತೆ.. ಸಂತಸ, ಹೆಮ್ಮೆ ಸೂಚಿಸುತ್ತಿತ್ತು ಮೊಗ, ಎಂದೆಂದೂ ಕಾಣದ ಕಾಂತಿಯ.. ಸೂಸುತಿದ್ದವು ಕಂಗಳು, ಮನದಲ್ಲೆದ್ದ ಜ್ವಾಲೆಯ., ಸಾಕ್ಷಿಯೇನೋ, ಎಂಬಂತೆ.. ನನಗೂ, ಇದೆಲ್ಲದಕ್ಕೂ.. ಸಂಭಂಧವೇ.. ಇಲ್ಲ್ವವೆಂಬಂತೆ ಮರುಗುತಿತ್ತು ಮನ, ಅಗಲಿಕೆಯ ಕಹಿಸತ್ಯವ, ನುಂಗಲೆಂಬಂತೆ.. ___________________________________________________________  ಅಕ್ಟೋಬರ್, ೨೦೦೭

ನನ್ನೊಳಗೆ..

ಏಕಾಂತದಲ್ಲೆಲ್ಲೋ.. ಕಾಡುವ ದನಿ.. ಯಾವುದೋ ಪಿಸುಮಾತು, ಮತ್ತಾವುದೋ ಸ್ವರ.. ಯಾರದೋ ಕೇಕೆ, ಮತ್ತಾರದೋ ಆಕ್ರಂದನ.. ಒಮ್ಮೆ, ಕಟ್ಟು ಬಿಚ್ಚಿದ ಅಶ್ವಗಳ ನಾಗಾಲೋಟದಂತೆ.. ಮತ್ತೊಮ್ಮೆ, ಯಾರೋ ಹಾಕಿದ ಲಯಬದ್ದ ತಾಳದಂತೆ.. ಎಷ್ಟೋ ಬಾರಿ.. ಮಲಗಿದ್ದಿದೆ, ಶಪಿಸಿ.. ಯಾವುದೀ ದರಿದ್ರ ದನಿಯೆಂದು.. ಬಹಳ ತಡವಾಯಿತೋ ಏನೋ.. ತಿಳಿದದ್ದು ಈ ರೀತಿ ವರ್ತಿಸುವ ಹೃದಯ, ನನ್ನಲ್ಲೇ.. ಇದೆಯೆಂದು.. ___________________________________________________________ ೧೩ ಅಕ್ಟೋಬರ್ , ೨೦೦೭

ಸ್ವಾಭಿಮಾನ

ಇನ್ನಾದರೂ ಸೋಲು.. ಇಷ್ಟೆಲ್ಲಾ ಆದ ಮೇಲೂ.. ಬಂದ ಭಾವನೆಗಳಿಗೆ ಬೇಲಿ ಹಾಕಿ ಬಂಧಿಸಿದಾದ ಮೇಲೂ .. ಆಸರೆಗಾಗಿ ತಡಕಾಡುತಿದ್ದ ಕರಗಳಾ.. ಕಟ್ಟಿ ಹಾಕಿದ ಮೇಲೂ... ಸಜ್ಜನರಿಗಾದರೂ ಬಾಗಬೆಕಿದ್ದ ಶಿರವ.. ಧಿಕ್ಕರಿಸಿ ಮೆರೆವಂತೆ ಮಾಡಿದ ಮೇಲೂ.. ಒತ್ತರಿಸಿ ಬಂದ ಕಂಬನಿಯಾ.. ಕಣ್ಣೆವೆಗಳ ತೇವಕ್ಕೆ ಮಾತ್ರ, ಮೀಸಲಾಗಿಸಿದ ಮೇಲೂ.. ಇನ್ನಾದರೂ ಬಿಡುವೆಯ ನನ್ನ.. ಒಮ್ಮೆ ಮನತುಂಬಿ ನಿರರ್ಗಳವಾಗಿ ಅಳಲು... ಇನ್ನಾದರೂ ಸೋಲು ನೀ ಮನವೇ.. ಇಷ್ಟೆಲ್ಲಾ.. ಆದ ಮೇಲೂ.. ___________________________________________________________ ೧೩ ಅಕ್ಟೋಬರ್, ೨೦೦೭